Popular Posts

Tuesday, February 22, 2011

ರಂಗೋಲಿ ಸ್ಪರ್ಧೆ!!!

ಪ್ರಿಯತಮನ ಸ್ವಾಗತಿಸಲು
ಹಸಿರು ತೋರಣವ ಕಟ್ಟಿ
ಬಗೆ ಬಗೆ ಬಣ್ಣದ ಹೂಗಳನರಳಿಸಿ
ಗಂಗೆ, ತುಂಗೆ, ಕಾವೇರಿಯರನು
ಎಳೆ ಎಳೆಯಾಗಿ ಬಿಡಿಸಿ
ಚಿತ್ತಾರ ರಚಿಸಿದಳು ವಸುಂಧರೆ!

ನಲ್ಲೆಯ ಸಂಭ್ರಮಕೆ ನಾಚಿ
ಕೆಂಪಗಾದ ರವಿಯು
ನೆಚ್ಚಿನ ಭಂಟ ವರುಣನನು
ಪನ್ನೀರ ಮಳೆಗರೆಯಲು ಕೋರಿ
ನೀಲಗಗನದ ಹಾಸಿನ ಮೇಲೆ
ಬಿಡಿಸಿ ನಿಂತನು ಕಾಮನಬಿಲ್ಲು!!!

Saturday, February 12, 2011

ನಿತ್ಯ ಪ್ರೇಮೋತ್ಸವ!!!

ಹಿಮರಾಶಿಯ ಮುಸುಕನೊದ್ದು
ಸಿಹಿ ನಿದ್ರೆಯಲಿ ಕನವರಿಸುತಿಹ ಭೂರಮೆಗೆ
ಹೊಂಗಿರಣದ ಕೌದಿಯನೊದಿಸಿ
"ಶುಭೋದಯ" ಎಂದನು ರವಿತೇಜ!

ಹಚ್ಚಹಸುರಿನ ದುಪ್ಪಟ್ಟವನೊದ್ದು,
ಜುಳುಜುಳು ಹರಿವ ಝರಿಯೊಳಗೆ ಪಾದಗಳನಾಡಿಸುತ
ತುರುಬಿನ ತುಂಬ ಹೂಮುಡಿದ ಭೂರಮೆ
ರವಿಯತ್ತ ವಾರೆನೋಟ ಬೀರಿ ನಸುನಕ್ಕಳು!

ಜಗಜಗಿಸುವ ಚುಕ್ಕಿಗಳ ನಡುವಿಂದ
ಭೂರಮೆಗೆ ಕ್ಷೀರಧಾರೆಯ ಚೆಲ್ಲುತಿಹ
ನಗುಮೊಗದ ಪೂರ್ಣಚಂದ್ರನು
"ಬಾ ನಲ್ಲೆ ಮಧು ಚಂದ್ರಕೆ" ಎಂದು ಕೂಗಿ ಕರೆದಿಹನು!!!

Thursday, February 3, 2011

ನಾಚಿ ನೀರಾದಳು ವಸುಂಧರಾ!!!!

(ಮೊನ್ನೆ ಸೂರ್ಯನಿಂದ ಬಂದ ಪತ್ರಕ್ಕೆ ಇದೋ ಇಲ್ಲಿದೆ ವಸುಂಧರೆಯ ಉತ್ತರ!)

ವಾಹ್! ಎಂತಹ ಅಮರಪ್ರೇಮಿಯೋ ಚಿನ್ನು ನೀನು! ನಂಗೊತ್ತಿತ್ತು ನೀನೊಬ್ಬ ಮಹಾ ರಸಿಕ ಜೊತೆಗೆ ಸ್ವಲ್ಪ ತುಂಟ ಅಂತ. ಆದರೆ ಮೃದುಮಾತಿನ, ಯಾವಾಗಲೂ ನನ್ನ ಸೆರಗು ಹಿಡಿದು ಲಲ್ಲೆಗರೆವ ನನ್ನ ಮುದ್ದು ನಲ್ಲ ಒಬ್ಬ ರೊಮ್ಯಾಂಟಿಕ್ ಕವಿ ಕೂಡ ಅಂತ confirm ಆಗಿದ್ದು ನಿನ್ನ ಪತ್ರ ಓದಿದಾಗಲೇ ಕಣೋ.
ಏಯ್! ಇಷ್ಟು ದಿನ ಯಾಕೋ ಪತ್ರ ಬರೆದಿರಲಿಲ್ಲ? ಹೌದು ಅದ್ಯಾವಾಗ ಮಾನಸ ಗಂಗೋತ್ರಿ ಸೇರಿದೆಯೋ ಕಳ್ಳ? ಅಬ್ಬಾ ಈ ನಿನ್ನ ಪತ್ರದಲ್ಲಿ ಏನುಂಟು ಏನಿಲ್ಲ? ಡಿಯರ್! ಓದುತ್ತಾ ಓದಂತೆ ನಂಗೆ ಎಷ್ಟು ನಾಚಿಕೆಯಾಯ್ತು ಗೊತ್ತಾ? ಥೂ ಹೋಗೋ ಅದನ್ನೆಲ್ಲ ಹೇಳೋಕಾಗಲ್ಲ!!! ಅದಿರಲಿ ಚಿನ್ನಾ ನೀನು  ಕುವೆಂಪು, ಜಿಎಸ್'ಎಸ್, ಕೆ'ಎಸ್'ನ, ಅನಂತಸ್ವಾಮಿಯವರನ್ನೆಲ್ಲ ಪ್ರಸ್ತಾಪಿಸಿರುವುದು ನೋಡಿ ನನಗೆ ನಿಜಕ್ಕೂ ಹೃದಯ ತುಂಬಿ ಬಂತು ಕಣೋ. ರವಿ ಡಿಯರ್! ನಮ್ಮಿಬ್ಬರ ಅಮರಪ್ರೇಮದ ವಿಸ್ಮಯಲೋಕದಲ್ಲಿ ಇವರೆಲ್ಲ ಸದಾ ಮಿನುಗುವ ನಕ್ಷತ್ರಗಳು ಕಣೋ.

ಅದೆಲ್ಲ OK . ನಿನಗ್ಯಾಕೋ ಆ ಶಶಾಂಕ್'ನ ಕಂಡರೆ ಅಷ್ಟೊಂದು ಹೊಟ್ಟೆಕಿಚ್ಚು? ನಿನ್ನ ಈ ಅಸೂಯೆ ನೋಡಿ ನನಗೆ ನಗು ತಡಿಯೋಕೇ ಆಗಲಿಲ್ಲ ಗೊತ್ತಾ. ಚಿಂತಿಸಬೇಡ ಡಿಯರ್. ಶಶಾಂಕ್ ಸ್ವಲ್ಪ ತಿಕ್ಕಲ ಇರಬಹುದು ಆದರೆ ಅವನೊಬ್ಬ ಉತ್ತಮ ಗೆಳೆಯ ಕಣೋ. ಒಮ್ಮೊಮ್ಮೆ "ಬಾ ನನ್ನ ಬೆಳದಿಂಗಳ ಬಾಲೆ" ಅಂತ ಪೂಸಿ ಹೊಡೆಯುತ್ತಾನಾದರೂ, ಲಕ್ಷಣರೇಖೆಯನ್ನು ಎಂದೂ ದಾಟಿದವನಲ್ಲ. ಈಗ ಸಮಾಧಾನವಾಯ್ತಾ ಚಿನ್ನೂ!

ಛೇ ಪಾಪ. ಆ ವರುಣ್ ಬಗ್ಗೆ ಸಹ ಹಾಗೆಲ್ಲಾ ಹೇಳಬೇಡ ಕಣೋ. ಅವನೂ ಕೂಡ ಒಬ್ಬ best friend ಅಷ್ಟೇ. ಕಾಮನಬಿಲ್ಲು ಚಿತ್ರ ನಿನ್ನದೇ ಅಂತ ಗೊತ್ತು. ಆದರೆ ಅವನು ಯಾವಾಗಲೂ ಅದನ್ನು ತೊಳೆದು ಸ್ವಚ್ಚಗೊಳಿಸಿ, ಅದರ ಪ್ರಖರತೆಯನ್ನು ಇನ್ನೂ ಹೆಚ್ಚಿಸುತ್ತಾನೆ ಗೊತ್ತಾ. ಅಷ್ಟಕ್ಕೇ ಅವನ ಬಗ್ಗೆ ಏನೇನೋ ಹೇಳಬೇಡ silly boy!!!  .

ನನ್ನ ಅಮರಪ್ರೇಮಿಯಲ್ಲೊಂದು ಸವಿನಯ ಪ್ರಾರ್ಥನೆ. ನೀನು ಇನ್ನೆಂದಿಗೂ ಕೆಲಸ ಬಿಡುವ ಯೋಚನೆ ಮಾತ್ರಾ ಮಾಡಬೇಡಾ ಪ್ಲೀಸ್. ನಿಂಗೊತ್ತಿಲ್ಲ ಕಣೋ, ಬೆಳಗಿನ ಸಿಹಿನಿದ್ರೆಯಲ್ಲಿ ನಿನ್ನ ಆಗಮನದ ನಿರೀಕ್ಷೆಯಿಂದ ನಾನು ಕಾಯುತ್ತಾ, ಹಂಬಲಿಸುತ್ತಾ ಅನುಭವಿಸುವ ಆ ರಸವಿಸ್ಮಯದ ಕ್ಷಣಗಳು ನೀನು ಆಗಮಿಸುತ್ತಿದ್ದಂತೆ ಪಡೆದುಕೊಳ್ಳುವ ರೋಚಕತೆಯ ತಲ್ಲಣ!!! ಓಹ್! ಅದನ್ನು ಹೇಗೆ ವರ್ಣಿಸಿದರೂ ಸಾಲದು ಡಿಯರ್!!! ಅದಿರಲಿ ಸಂಜೆ ನೀನು dutyಗೆ ಹೊರಡುವಾಗ ಅದ್ಯಾಕೆ ನನಗಿಂತಲೂ ನಿನ್ನ ಮುಖವೇ ಹೆಚ್ಚು ಕೆಂಪಗಿರುತ್ತಲ್ಲ??? ನಾಳೆ ಬೆಳಿಗ್ಗೆ ನೀನಿದಕ್ಕೆ ಉತ್ತರಿಸಲೇಬೇಕು ಆಯ್ತಾ.

ಹ್ಹಾಂ! ಇನ್ನೊಂದು ಮುಖ್ಯ ವಿಷಯ ಹೇಳಲು ಮರೆತಿದ್ದೆ ಚಿನ್ನೂ. ನಮ್ಮ email ಗಳನ್ನೂ ಕದಿಯಬಲ್ಲ ಕಳ್ಳರಿದ್ದಾರೆ ಎಚ್ಚರಿಕೆ!!!