Popular Posts

Monday, January 17, 2011

ಬೆಳದಿಂಗಳ ಬಾಲೆ.....

ಕಡಿದಾದ ಬೆಟ್ಟಗಳ ಮೈದುಂಬಿ ಹಬ್ಬಿಹ
ದಟ್ಟ ಕಾನನದ ಹಸಿರು ಚಪ್ಪರದೊಳಗೆ
ನೆತ್ತಿಯ ಮೇಲಿಂದ ನೇಸರನು
ಕಿರಣದ ಹೆಜ್ಜೆಗಳನಿಟ್ಟು ನರ್ತಿಸಿಹನು!

ಹಕ್ಕಿಗಳ ಚಿಲಿಪಿಲಿ, ಜೀರುಂಡೆಗಳ ನಿನಾದ
ಹಿತವಾಗಿ ತಿಕ್ಕಿ ಸುಯ್ಯಿಡುತಿಹ ತಂಗಾಳಿ
ಜುಳುಜುಳು ಹರಿವ ಝರಿಗಳ ಕಲರವ
ಎಲ್ಲ ಮೇಳೈಸಿ ಸೃಷ್ಟಿಸಿವೆ ಗಂಧರ್ವ ಲೋಕ!

ಅನತಿ ದೂರದಿ ಕೂಗಿ ಕರೆಯುತಿಹ
ಕುಹು ಕುಹೂ ಕೋಗಿಲೆಯ ಇಂಚರದ
ಜಾಡುಹಿಡಿದು ಸಾಗಿದೆನಗೆ ಧುತ್ತನೆ ಎದುರಾಯ್ತು
ನೊರೆ ಹಾಲಿನೊಳು ಭೋರ್ಗರೆಯುತಿಹ ಜಲಪಾತ!

ವನದೇವಿಯ ರುದ್ರ ರಮಣೀಯತೆಗೆ ನಿಬ್ಬೆರಗಾಗಿ
ಅಡಿಯಿಡುತಿರೆನ್ನ ದೃಷ್ಟಿಯ ಥಟ್ಟನೆ ಸೆಳೆದಳು
ಜಲಧಾರೆಗೆ ಮೊಗವೊಡ್ಡಿ ಕೇಶರಾಶಿಯ ಹಿಂದಿಕ್ಕಿ
ಮೈಮರೆತು ಸಂಭ್ರಮಿಸುತಿಹ ಶ್ವೇತಾಂಬರಿ!

ಯಾರೀ ನಗುಮೊಗದ ಬೆಳದಿಂಗಳ ಬಾಲೆ?
ಹಾಲ್ಗೆನ್ನೆಯ ಸಿರಿಯೊಡತಿಯ ಸೆರೆ ಹಿಡಿವಾಸೆಗೆ
ಸರಸರನೆ ಕ್ಯಾಮರಾ ತೆರೆದು ಕ್ಲಿಕ್ಕಿಸುವಾಗ
ಆಯತಪ್ಪಿ ಜಾರಿದಾಗೆನ್ನ ಸಿಹಿಸ್ವಪ್ನ ಭಗ್ನವಾಯ್ತು!!

4 comments:

  1. ಹೃತ್ಪೂರ್ವಕ ಧನ್ಯವಾದಗಳು ಸರ್.

    ReplyDelete
  2. ನಿಮ್ಮ ಕವನ ತುಂಬಾ ಚೆನ್ನಾಗಿದೆ ಸರ್..
    ಬೆಳದಿಂಗಳ ಬಾಲೆ ಹೆಸರೂ ಸಹ...

    ReplyDelete