Popular Posts

Tuesday, April 5, 2011

ಯುಗಾದಿಯ ಸಂಭ್ರಮ!!!

ಮೂವು ಹೊಂಗೆಯ
ತಳಿರು ತೋರಣವ ಕಟ್ಟಿ
ತುಂಬೆಯ ಹೂವರಳಿಸಿ
ಚೈತ್ರ ಮಾಸಕೆ
ಹೊಸ ಮುನ್ನುಡಿ ಬರೆದನು ವಸಂತ!

ಶುಭ ಮುಂಜಾನೆಯಲಿ
ಪ್ರೀತಿಯ ಸಾಗರದಲೆಗಳಲಿ
ಮಿಂದು ತೇಲುತಿಹ ಹೃದಯಗಳೆರಡು
ಮಲ್ಲಿಗೆಯ ಮಾಲೆಗೆ ಕೊರಳನೊಡ್ಡಿ
ಅಡಿಯಿಟ್ಟವು ನವಜೀವನದ ಪಲ್ಲಂಗಕೆ!

ಹೊಂಗಿರಣದ ಸಿಹಿಸ್ಪರ್ಶಕೆ
ಪುಳಕಿತವಾಗಿಹ ಹಸಿರ ಬನದೆಡೆಯಿಂದ
ತೇಲಿಬಂತು ಕುಹೂ ಕುಹೂ ಇಂಚರ!
ಈ ರಸವಿಸ್ಮಯಕೆ ನಿಬ್ಬೆರಗಾದ ಕವಿಯು
ಅಂಕಿತ ಹಾಕಿದನು ಯುಗಾದಿಯ ಮುನ್ನುಡಿಗೆ!!!

Tuesday, February 22, 2011

ರಂಗೋಲಿ ಸ್ಪರ್ಧೆ!!!

ಪ್ರಿಯತಮನ ಸ್ವಾಗತಿಸಲು
ಹಸಿರು ತೋರಣವ ಕಟ್ಟಿ
ಬಗೆ ಬಗೆ ಬಣ್ಣದ ಹೂಗಳನರಳಿಸಿ
ಗಂಗೆ, ತುಂಗೆ, ಕಾವೇರಿಯರನು
ಎಳೆ ಎಳೆಯಾಗಿ ಬಿಡಿಸಿ
ಚಿತ್ತಾರ ರಚಿಸಿದಳು ವಸುಂಧರೆ!

ನಲ್ಲೆಯ ಸಂಭ್ರಮಕೆ ನಾಚಿ
ಕೆಂಪಗಾದ ರವಿಯು
ನೆಚ್ಚಿನ ಭಂಟ ವರುಣನನು
ಪನ್ನೀರ ಮಳೆಗರೆಯಲು ಕೋರಿ
ನೀಲಗಗನದ ಹಾಸಿನ ಮೇಲೆ
ಬಿಡಿಸಿ ನಿಂತನು ಕಾಮನಬಿಲ್ಲು!!!

Saturday, February 12, 2011

ನಿತ್ಯ ಪ್ರೇಮೋತ್ಸವ!!!

ಹಿಮರಾಶಿಯ ಮುಸುಕನೊದ್ದು
ಸಿಹಿ ನಿದ್ರೆಯಲಿ ಕನವರಿಸುತಿಹ ಭೂರಮೆಗೆ
ಹೊಂಗಿರಣದ ಕೌದಿಯನೊದಿಸಿ
"ಶುಭೋದಯ" ಎಂದನು ರವಿತೇಜ!

ಹಚ್ಚಹಸುರಿನ ದುಪ್ಪಟ್ಟವನೊದ್ದು,
ಜುಳುಜುಳು ಹರಿವ ಝರಿಯೊಳಗೆ ಪಾದಗಳನಾಡಿಸುತ
ತುರುಬಿನ ತುಂಬ ಹೂಮುಡಿದ ಭೂರಮೆ
ರವಿಯತ್ತ ವಾರೆನೋಟ ಬೀರಿ ನಸುನಕ್ಕಳು!

ಜಗಜಗಿಸುವ ಚುಕ್ಕಿಗಳ ನಡುವಿಂದ
ಭೂರಮೆಗೆ ಕ್ಷೀರಧಾರೆಯ ಚೆಲ್ಲುತಿಹ
ನಗುಮೊಗದ ಪೂರ್ಣಚಂದ್ರನು
"ಬಾ ನಲ್ಲೆ ಮಧು ಚಂದ್ರಕೆ" ಎಂದು ಕೂಗಿ ಕರೆದಿಹನು!!!

Thursday, February 3, 2011

ನಾಚಿ ನೀರಾದಳು ವಸುಂಧರಾ!!!!

(ಮೊನ್ನೆ ಸೂರ್ಯನಿಂದ ಬಂದ ಪತ್ರಕ್ಕೆ ಇದೋ ಇಲ್ಲಿದೆ ವಸುಂಧರೆಯ ಉತ್ತರ!)

ವಾಹ್! ಎಂತಹ ಅಮರಪ್ರೇಮಿಯೋ ಚಿನ್ನು ನೀನು! ನಂಗೊತ್ತಿತ್ತು ನೀನೊಬ್ಬ ಮಹಾ ರಸಿಕ ಜೊತೆಗೆ ಸ್ವಲ್ಪ ತುಂಟ ಅಂತ. ಆದರೆ ಮೃದುಮಾತಿನ, ಯಾವಾಗಲೂ ನನ್ನ ಸೆರಗು ಹಿಡಿದು ಲಲ್ಲೆಗರೆವ ನನ್ನ ಮುದ್ದು ನಲ್ಲ ಒಬ್ಬ ರೊಮ್ಯಾಂಟಿಕ್ ಕವಿ ಕೂಡ ಅಂತ confirm ಆಗಿದ್ದು ನಿನ್ನ ಪತ್ರ ಓದಿದಾಗಲೇ ಕಣೋ.
ಏಯ್! ಇಷ್ಟು ದಿನ ಯಾಕೋ ಪತ್ರ ಬರೆದಿರಲಿಲ್ಲ? ಹೌದು ಅದ್ಯಾವಾಗ ಮಾನಸ ಗಂಗೋತ್ರಿ ಸೇರಿದೆಯೋ ಕಳ್ಳ? ಅಬ್ಬಾ ಈ ನಿನ್ನ ಪತ್ರದಲ್ಲಿ ಏನುಂಟು ಏನಿಲ್ಲ? ಡಿಯರ್! ಓದುತ್ತಾ ಓದಂತೆ ನಂಗೆ ಎಷ್ಟು ನಾಚಿಕೆಯಾಯ್ತು ಗೊತ್ತಾ? ಥೂ ಹೋಗೋ ಅದನ್ನೆಲ್ಲ ಹೇಳೋಕಾಗಲ್ಲ!!! ಅದಿರಲಿ ಚಿನ್ನಾ ನೀನು  ಕುವೆಂಪು, ಜಿಎಸ್'ಎಸ್, ಕೆ'ಎಸ್'ನ, ಅನಂತಸ್ವಾಮಿಯವರನ್ನೆಲ್ಲ ಪ್ರಸ್ತಾಪಿಸಿರುವುದು ನೋಡಿ ನನಗೆ ನಿಜಕ್ಕೂ ಹೃದಯ ತುಂಬಿ ಬಂತು ಕಣೋ. ರವಿ ಡಿಯರ್! ನಮ್ಮಿಬ್ಬರ ಅಮರಪ್ರೇಮದ ವಿಸ್ಮಯಲೋಕದಲ್ಲಿ ಇವರೆಲ್ಲ ಸದಾ ಮಿನುಗುವ ನಕ್ಷತ್ರಗಳು ಕಣೋ.

ಅದೆಲ್ಲ OK . ನಿನಗ್ಯಾಕೋ ಆ ಶಶಾಂಕ್'ನ ಕಂಡರೆ ಅಷ್ಟೊಂದು ಹೊಟ್ಟೆಕಿಚ್ಚು? ನಿನ್ನ ಈ ಅಸೂಯೆ ನೋಡಿ ನನಗೆ ನಗು ತಡಿಯೋಕೇ ಆಗಲಿಲ್ಲ ಗೊತ್ತಾ. ಚಿಂತಿಸಬೇಡ ಡಿಯರ್. ಶಶಾಂಕ್ ಸ್ವಲ್ಪ ತಿಕ್ಕಲ ಇರಬಹುದು ಆದರೆ ಅವನೊಬ್ಬ ಉತ್ತಮ ಗೆಳೆಯ ಕಣೋ. ಒಮ್ಮೊಮ್ಮೆ "ಬಾ ನನ್ನ ಬೆಳದಿಂಗಳ ಬಾಲೆ" ಅಂತ ಪೂಸಿ ಹೊಡೆಯುತ್ತಾನಾದರೂ, ಲಕ್ಷಣರೇಖೆಯನ್ನು ಎಂದೂ ದಾಟಿದವನಲ್ಲ. ಈಗ ಸಮಾಧಾನವಾಯ್ತಾ ಚಿನ್ನೂ!

ಛೇ ಪಾಪ. ಆ ವರುಣ್ ಬಗ್ಗೆ ಸಹ ಹಾಗೆಲ್ಲಾ ಹೇಳಬೇಡ ಕಣೋ. ಅವನೂ ಕೂಡ ಒಬ್ಬ best friend ಅಷ್ಟೇ. ಕಾಮನಬಿಲ್ಲು ಚಿತ್ರ ನಿನ್ನದೇ ಅಂತ ಗೊತ್ತು. ಆದರೆ ಅವನು ಯಾವಾಗಲೂ ಅದನ್ನು ತೊಳೆದು ಸ್ವಚ್ಚಗೊಳಿಸಿ, ಅದರ ಪ್ರಖರತೆಯನ್ನು ಇನ್ನೂ ಹೆಚ್ಚಿಸುತ್ತಾನೆ ಗೊತ್ತಾ. ಅಷ್ಟಕ್ಕೇ ಅವನ ಬಗ್ಗೆ ಏನೇನೋ ಹೇಳಬೇಡ silly boy!!!  .

ನನ್ನ ಅಮರಪ್ರೇಮಿಯಲ್ಲೊಂದು ಸವಿನಯ ಪ್ರಾರ್ಥನೆ. ನೀನು ಇನ್ನೆಂದಿಗೂ ಕೆಲಸ ಬಿಡುವ ಯೋಚನೆ ಮಾತ್ರಾ ಮಾಡಬೇಡಾ ಪ್ಲೀಸ್. ನಿಂಗೊತ್ತಿಲ್ಲ ಕಣೋ, ಬೆಳಗಿನ ಸಿಹಿನಿದ್ರೆಯಲ್ಲಿ ನಿನ್ನ ಆಗಮನದ ನಿರೀಕ್ಷೆಯಿಂದ ನಾನು ಕಾಯುತ್ತಾ, ಹಂಬಲಿಸುತ್ತಾ ಅನುಭವಿಸುವ ಆ ರಸವಿಸ್ಮಯದ ಕ್ಷಣಗಳು ನೀನು ಆಗಮಿಸುತ್ತಿದ್ದಂತೆ ಪಡೆದುಕೊಳ್ಳುವ ರೋಚಕತೆಯ ತಲ್ಲಣ!!! ಓಹ್! ಅದನ್ನು ಹೇಗೆ ವರ್ಣಿಸಿದರೂ ಸಾಲದು ಡಿಯರ್!!! ಅದಿರಲಿ ಸಂಜೆ ನೀನು dutyಗೆ ಹೊರಡುವಾಗ ಅದ್ಯಾಕೆ ನನಗಿಂತಲೂ ನಿನ್ನ ಮುಖವೇ ಹೆಚ್ಚು ಕೆಂಪಗಿರುತ್ತಲ್ಲ??? ನಾಳೆ ಬೆಳಿಗ್ಗೆ ನೀನಿದಕ್ಕೆ ಉತ್ತರಿಸಲೇಬೇಕು ಆಯ್ತಾ.

ಹ್ಹಾಂ! ಇನ್ನೊಂದು ಮುಖ್ಯ ವಿಷಯ ಹೇಳಲು ಮರೆತಿದ್ದೆ ಚಿನ್ನೂ. ನಮ್ಮ email ಗಳನ್ನೂ ಕದಿಯಬಲ್ಲ ಕಳ್ಳರಿದ್ದಾರೆ ಎಚ್ಚರಿಕೆ!!!

Monday, January 24, 2011

ನನ್ನ ಪ್ರೀತಿಯ ವಸುಂಧರಾ!!!

ವಸು ಡಾರ್ಲಿಂಗ್, ನಿನಗೊಂದು surprise ಕೊಡಲೆಂದು ಈ ಪ್ರೇಮ ಪತ್ರ. ಹಗಲೆಲ್ಲಾ ನಿನ್ನನ್ನು ಲಲ್ಲೆಗರೆಯುತ್ತಾ, ರಮಿಸುತ್ತಾ, ಸರಸ ಸಲ್ಲಾಪದಲ್ಲಿರುವಾಗ ಒಂದೆರಡು ವಿಚಾರಗಳನ್ನು ಪ್ರಸ್ತಾಪಿಸಲಾಗಿಲ್ಲ. ಹೇಗೂ ಈ ರಾತ್ರಿ ಅಂತಹ ಕೆಲಸವಿಲ್ಲದಿರುವುದರಿಂದ ಬರೆಯುತ್ತಿದ್ದೇನೆ.
ಹೇಗೆ ಆರಂಬಿಸಲಿ ನನ್ನ ಚಿನ್ನಾ? ಮುಂಜಾನೆ ಬರುವಾಗ ಅಬ್ಬಾ ಅದೆಂತಹ ಲಜ್ಜೆ ನಲ್ಲೆ ನಿನ್ನ ಮೊಗದಲ್ಲಿ! ನರ್ತಿಸುವ ಮುಂಗುರುಳುಗಳಲ್ಲಿ ಫಳ ಫಳನೆ ಹೊಳೆವ ಆ ಮುತ್ತಿನ ಹನಿಗಳನ್ನು ಹಿತವಾಗಿ ಸ್ಪರ್ಶಿಸುತ್ತಲೇ ನನ್ನ ದಿನಚರಿಯ ಶುಭಾರಂಭ! ಮೃದುವಾಗಿ ಕಂಪಿಸುವ ಆ ಕೆಂದುಟಿಗಳನ್ನು ನಿತ್ಯವೂ ಮುದ್ದಿಸುವಾಗ ಇದೇ ಪ್ರಪ್ರಥಮ ಚುಂಬನವೋ ಎಂಬಂತೆ ರೋಮಾಂಚನ! ಸಂಜೆ ಮತ್ತೆ ನಾ dutyಗೆ ತೆರಳುವಾಗ ನಿನ್ನ ಕಿತ್ತಳೆ ಗಲ್ಲಗಳನ್ನು ನವಿರಾಗಿ ನೇವರಿಸುತ್ತಾ ಅಗಲಿಕೆಯ ನೋವಿನಲ್ಲೂ ಸಿಗುವ ಸುಮಧುರ ಬೀಳ್ಕೊಡುಗೆಯ ಆ ಸಿಹಿ ಸಿಂಚನವೂ ಸಹ!!! ಏನು ಮಾಡಲಿ ಪ್ರಿಯೆ? ಈ ಕ್ಷಣಿಕ ಅಗಲಿಕೆ ನಮಗೆ ಅನಿವಾರ್ಯ. ನನ್ನ ಕರ್ತವ್ಯ ನಿಷ್ಠೆಯನ್ನು ಅರ್ಥಮಾಡಿಕೊಳ್ಳುತ್ತೀಯಲ್ಲವೇ?.
ಬಂಗಾರಿ ನಿನಗೊಂದು ವಿಷಯ ತಿಳಿಸಬೇಕಿದೆ. ನನ್ನ ನೆಚ್ಚಿನ FAN ಪವನ್ ಒಂದೆರಡು ಕಳವಳಕಾರಿ ವಿಷಯಗಳನ್ನು ಅರುಹಿದ್ದಾನೆ. ಮೊದಲಿಗೆ ಆ ಅರೆಹುಚ್ಚ ಶಶಾಂಕ್ ನಿನ್ನನ್ನು ಸೆಳೆಯಲು "ಚಂದ್ರ ಮಂಚಕೆ ಬಾ ಚಕೋರಿ", "ಸಂಗಾತಿ ನೋಟವೆ ಚಂದ", "ನನ್ನವಳು ನನ್ನೆದೆಯ ಹೊನ್ನಾಡನಾಡುವಳು" ಎಂದೆಲ್ಲಾ ಹಾಡುತ್ತಾ ತಿರುಗುತ್ತಿದ್ದಾನಂತೆ. ಜೊತೆಗೆ ಮಾನಸ ಗಂಗೋತ್ರಿಯಲ್ಲಿ ಕುವೆಂಪು, ಜಿಎಸ್'ಎಸ್, ಕೆ'ಎಸ್'ನರವರ ಪ್ರೇಮಕಾವ್ಯ study ಮಾಡುತ್ತಿದ್ದಾನಂತೆ. ಸಾಲದ್ದಕ್ಕೆ ಅನಂತಸ್ವಾಮಿಯವರ ಸಂಗೀತ ಶಾಲೆಗೂ ಸೇರಿದ್ದಾನಂತೆ. ಹುಷಾರು ಪ್ರಿಯೆ, ಈ ಶಶಾಂಕ್ ಒಬ್ಬ ಹಗಲು ಕುರುಡ ಎಂಬುದು ನಿನಗೇ ಗೊತ್ತಲ್ಲ! ಇನ್ನು ಆ ವರುಣ್ ಕೂಡ ಅದೇ ಹಾದಿ ಹಿಡಿದಿದ್ದಾನಂತೆ? ನಾನು ನಿನಗಾಗಿ ಬಿಡಿಸಿದ್ದ "ಕಾಮನಬಿಲ್ಲು" ಚಿತ್ರಪಟವನ್ನು ಕದ್ದು, ತನ್ನದೇ ಎಂಬಂತೆ ನಿನಗೆ ತೋರಿಸಿದನಂತೆ! ಪ್ರಿಯೆ ಈ ಮೂರ್ಖರ ಗೊಡ್ಡು ವರಸೆಗಳಿಗೆ ನೀನು ಮರುಳಾಗುವುದಿಲ್ಲವೆಂದು ಆಶಿಸುತ್ತೇನೆ. ನನ್ನ ಮುದ್ದು ನಲ್ಲೆಗೆ ನಮ್ಮ ಅಮರ ಪ್ರೇಮ ಇಡೀ ವಿಶ್ವಕ್ಕೆ ಮಾದರಿಯೆಂಬ ಅರಿವಿದೆ ಎನ್ನುವ ದೃಢ ವಿಶ್ವಾಸ ನನ್ನದು.
ಪವನ್ ಹೀಗೆಯೇ ಏನೇನೋ ಹೇಳುತ್ತಿರುತ್ತಾನೆ. ಆ ಅಲೆಮಾರಿ ನನ್ನನ್ನು impress ಮಾಡಲು ಇದೆನ್ನಲ್ಲಾ ಹೇಳಿರುವ ಸಾದ್ಯತೆಗಳಿದ್ದರೂ, ಅವನ ನಿಷ್ಠೆಯನ್ನು ಶಂಕಿಸಲಾರೆ. ಆ ಶಶಾಂಕ್ ಮತ್ತು ವರುಣ್ ರನ್ನು ನಾನು ವಿಚಾರಿಸಿಕೊಳ್ಳುತ್ತೇನೆ. ನೀನು ಮಾತ್ರಾ ನಿಶ್ಚಿಂತಳಾಗಿರು ಪ್ರಿಯೆ .
ಪ್ರಥಮ ಪತ್ರದಲ್ಲೇ ಈ ಕಹಿ ವಿಚಾರ ಪ್ರಸ್ತಾಪಿಸಿರುವುದಕ್ಕೆ ಕ್ಷಮೆ ಇರಲಿ ಪ್ರಿಯೆ. ಹಾಂ! ನನ್ನ ನಿತ್ಯ ಸುಮಂಗಲಿಗೊಂದು ಸಿಹಿ ಸುದ್ದಿಯೂ ಇದೆ. ಅಮೇರಿಕೆಯ ಅಧ್ಯಕ್ಷರಾದ ಒಬಾಮರವರು ತಮ್ಮ ಪ್ರಜೆಗಳಿಗೆ ಸ್ವಾವಲಂಬಿಗಳಾಗಿರಬೇಕೆಂದೂ, ಭರತಖಂಡದ ಮೇಲೆ ಅವಲಂಬಿತರಾಗಬಾರದೆಂದೂ ಕರೆಕೊಟ್ಟಿದ್ದಾರೆ. ಇದನ್ನವರು ಆಚರಣೆಗೆ ತಂದುಬಿಟ್ಟರೆ ನಾನು ಈ ರಾತ್ರಿ ಪಾಳಿಯ ಕೆಲಸವನ್ನು ಕಳೆದುಕೊಳ್ಳುತ್ತೇನೆ. ಕರ್ತವ್ಯ ಭ್ರಷ್ಟನೆಂಬ ಅಪನಿಂದೆಯಿಲ್ಲದಯೆ ಈ ಕಿರಿಕಿರಿಯಿಂದ ಮುಕ್ತನಾಗಲು ಇದೊಂದು ಸುವರ್ಣಾವಕಾಶ. ಆಗ ನಾವಿಬ್ಬರು ಹಾಯಾಗಿ ಯಾವಾಗಲೂ ಒಟ್ಟಿಗೇ ಇರಬಹುದು. ಆ ಶುಭಗಳಿಗೆಯನ್ನು ಬೇಗ ಕರುಣಿಸೆಂದು ಪ್ರಾರ್ಥಿಸೋಣ ಪ್ರಿಯೆ.
ಪ್ರಿಯೆ ಗಣಕ ಭಾಷೆ ಬಳಸಿ ಬರೆದಿರುವ ಈ ಪ್ರಥಮ ಪತ್ರದಲ್ಲಿ ಏನಾದರೂ ತಪ್ಪುಗಳಿದ್ದರೆ ದಯವಿಟ್ಟು ಮನ್ನಿಸು. ಬೆಳಿಗ್ಗೆ ಬೇಗನೆ ನಿನ್ನೆದುರು ಹಾಜರ್! ನನ್ನ ಮುದ್ದು ನಲ್ಲೇ  bye.....
(ಕ್ಷಮೆ ಇರಲಿ, ಇದು ಸೂರ್ಯನ email ನಿಂದ ಕದ್ದ ಪತ್ರ)

Monday, January 17, 2011

ಬೆಳದಿಂಗಳ ಬಾಲೆ.....

ಕಡಿದಾದ ಬೆಟ್ಟಗಳ ಮೈದುಂಬಿ ಹಬ್ಬಿಹ
ದಟ್ಟ ಕಾನನದ ಹಸಿರು ಚಪ್ಪರದೊಳಗೆ
ನೆತ್ತಿಯ ಮೇಲಿಂದ ನೇಸರನು
ಕಿರಣದ ಹೆಜ್ಜೆಗಳನಿಟ್ಟು ನರ್ತಿಸಿಹನು!

ಹಕ್ಕಿಗಳ ಚಿಲಿಪಿಲಿ, ಜೀರುಂಡೆಗಳ ನಿನಾದ
ಹಿತವಾಗಿ ತಿಕ್ಕಿ ಸುಯ್ಯಿಡುತಿಹ ತಂಗಾಳಿ
ಜುಳುಜುಳು ಹರಿವ ಝರಿಗಳ ಕಲರವ
ಎಲ್ಲ ಮೇಳೈಸಿ ಸೃಷ್ಟಿಸಿವೆ ಗಂಧರ್ವ ಲೋಕ!

ಅನತಿ ದೂರದಿ ಕೂಗಿ ಕರೆಯುತಿಹ
ಕುಹು ಕುಹೂ ಕೋಗಿಲೆಯ ಇಂಚರದ
ಜಾಡುಹಿಡಿದು ಸಾಗಿದೆನಗೆ ಧುತ್ತನೆ ಎದುರಾಯ್ತು
ನೊರೆ ಹಾಲಿನೊಳು ಭೋರ್ಗರೆಯುತಿಹ ಜಲಪಾತ!

ವನದೇವಿಯ ರುದ್ರ ರಮಣೀಯತೆಗೆ ನಿಬ್ಬೆರಗಾಗಿ
ಅಡಿಯಿಡುತಿರೆನ್ನ ದೃಷ್ಟಿಯ ಥಟ್ಟನೆ ಸೆಳೆದಳು
ಜಲಧಾರೆಗೆ ಮೊಗವೊಡ್ಡಿ ಕೇಶರಾಶಿಯ ಹಿಂದಿಕ್ಕಿ
ಮೈಮರೆತು ಸಂಭ್ರಮಿಸುತಿಹ ಶ್ವೇತಾಂಬರಿ!

ಯಾರೀ ನಗುಮೊಗದ ಬೆಳದಿಂಗಳ ಬಾಲೆ?
ಹಾಲ್ಗೆನ್ನೆಯ ಸಿರಿಯೊಡತಿಯ ಸೆರೆ ಹಿಡಿವಾಸೆಗೆ
ಸರಸರನೆ ಕ್ಯಾಮರಾ ತೆರೆದು ಕ್ಲಿಕ್ಕಿಸುವಾಗ
ಆಯತಪ್ಪಿ ಜಾರಿದಾಗೆನ್ನ ಸಿಹಿಸ್ವಪ್ನ ಭಗ್ನವಾಯ್ತು!!

Thursday, December 30, 2010

ಆತ್ಮೀಯ ಕಲಾಭಿಮಾನಿಗಳೇ ಯಾಕೆ ಹೀಗಾಗಿದೆ????

ಮೆಲ್ಲುಸಿರೆ ಸವಿಗಾನ, ದೋಣಿ ಸಾಗಲಿ ಮುಂದೆ ಹೋಗಲಿ, ಇವಳು ಯಾರು ಬಲ್ಲೆಯೇನು ಇತ್ಯಾದಿ ಹೃದಯಸ್ಪರ್ಶಿ ಹಾಡುಗಳಿಂದ ನಮ್ಮ ಮನಸೂರೆಗೊಂಡಿದ್ದ ನಮ್ಮ ಕನ್ನಡ ಚಿತ್ರರಂಗಕ್ಕೆ ಈಗ ಏನಾಗಿದೆ??? ಹಳೆ ಪಾತ್ರೆ ಹಳೆ ಕಬ್ಬಿಣ, ಹೊಡಿ ಮಗ ಹೊಡಿ ಮಗ, ಕೆಂಚಾಲೋ ಮಂಚಾಲೋ ಜೊತೆಗೆ ಮಚ್ಚು ಲಾಂಗುಗಳನ್ನೂ ಹಾಡುಗಳಲ್ಲಿ ತುರುಕುತ್ತಿರುವ ಇವರಿಗೆಲ್ಲಾ ಏನಾಗಿದೆ? ಬರೀ ಹಣ ಶಿಳ್ಳೆಗಳಷ್ಟೇ ಮುಖ್ಯವೇ? ಕಲಾವಿದರಾಗಿ ಈ ನಾಡಿನ ಸಂಸ್ಕೃತಿ, ಪರಂಪರೆಯನ್ನು ಉಳಿಸಬೇಕಾದ ಮಹತ್ವದ ಜವಾಬ್ದಾರಿಯನ್ನು ಇವರುಗಳು ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ. ಕ್ಷಮಿಸಿ ನಾನು ಇಂದಿನ ಎಲ್ಲ ಚಿತ್ರಗಳನ್ನೂ ಸಾರಾಸಗಟಾಗಿ ತಿರಸ್ಕರಿಸುತ್ತಿಲ್ಲ. ಮುಂಗಾರು ಮಳೆಯ ಹಾಡುಗಳು ಎಲ್ಲರನ್ನು ರಂಜಿಸಿದ್ದು ನನ್ನ ನೆನಪಿನಲ್ಲಿ ಹಸಿರಾಗಿದೆ.ಈ ಕೀಳು ಅಭಿರುಚಿಯ ಹಾಡುಗಳಿಗೆ ಕೊನೆ ಎಂದು ಎಂಬುದಷ್ಟೇ ನನ್ನ ಅಳಲು. ದಯವಿಟ್ಟು ತಮ್ಮ ಮುಕ್ತ ಅಭಿಪ್ರಾಯ ತಿಳಿಸಿರಿ.