Popular Posts

Monday, January 24, 2011

ನನ್ನ ಪ್ರೀತಿಯ ವಸುಂಧರಾ!!!

ವಸು ಡಾರ್ಲಿಂಗ್, ನಿನಗೊಂದು surprise ಕೊಡಲೆಂದು ಈ ಪ್ರೇಮ ಪತ್ರ. ಹಗಲೆಲ್ಲಾ ನಿನ್ನನ್ನು ಲಲ್ಲೆಗರೆಯುತ್ತಾ, ರಮಿಸುತ್ತಾ, ಸರಸ ಸಲ್ಲಾಪದಲ್ಲಿರುವಾಗ ಒಂದೆರಡು ವಿಚಾರಗಳನ್ನು ಪ್ರಸ್ತಾಪಿಸಲಾಗಿಲ್ಲ. ಹೇಗೂ ಈ ರಾತ್ರಿ ಅಂತಹ ಕೆಲಸವಿಲ್ಲದಿರುವುದರಿಂದ ಬರೆಯುತ್ತಿದ್ದೇನೆ.
ಹೇಗೆ ಆರಂಬಿಸಲಿ ನನ್ನ ಚಿನ್ನಾ? ಮುಂಜಾನೆ ಬರುವಾಗ ಅಬ್ಬಾ ಅದೆಂತಹ ಲಜ್ಜೆ ನಲ್ಲೆ ನಿನ್ನ ಮೊಗದಲ್ಲಿ! ನರ್ತಿಸುವ ಮುಂಗುರುಳುಗಳಲ್ಲಿ ಫಳ ಫಳನೆ ಹೊಳೆವ ಆ ಮುತ್ತಿನ ಹನಿಗಳನ್ನು ಹಿತವಾಗಿ ಸ್ಪರ್ಶಿಸುತ್ತಲೇ ನನ್ನ ದಿನಚರಿಯ ಶುಭಾರಂಭ! ಮೃದುವಾಗಿ ಕಂಪಿಸುವ ಆ ಕೆಂದುಟಿಗಳನ್ನು ನಿತ್ಯವೂ ಮುದ್ದಿಸುವಾಗ ಇದೇ ಪ್ರಪ್ರಥಮ ಚುಂಬನವೋ ಎಂಬಂತೆ ರೋಮಾಂಚನ! ಸಂಜೆ ಮತ್ತೆ ನಾ dutyಗೆ ತೆರಳುವಾಗ ನಿನ್ನ ಕಿತ್ತಳೆ ಗಲ್ಲಗಳನ್ನು ನವಿರಾಗಿ ನೇವರಿಸುತ್ತಾ ಅಗಲಿಕೆಯ ನೋವಿನಲ್ಲೂ ಸಿಗುವ ಸುಮಧುರ ಬೀಳ್ಕೊಡುಗೆಯ ಆ ಸಿಹಿ ಸಿಂಚನವೂ ಸಹ!!! ಏನು ಮಾಡಲಿ ಪ್ರಿಯೆ? ಈ ಕ್ಷಣಿಕ ಅಗಲಿಕೆ ನಮಗೆ ಅನಿವಾರ್ಯ. ನನ್ನ ಕರ್ತವ್ಯ ನಿಷ್ಠೆಯನ್ನು ಅರ್ಥಮಾಡಿಕೊಳ್ಳುತ್ತೀಯಲ್ಲವೇ?.
ಬಂಗಾರಿ ನಿನಗೊಂದು ವಿಷಯ ತಿಳಿಸಬೇಕಿದೆ. ನನ್ನ ನೆಚ್ಚಿನ FAN ಪವನ್ ಒಂದೆರಡು ಕಳವಳಕಾರಿ ವಿಷಯಗಳನ್ನು ಅರುಹಿದ್ದಾನೆ. ಮೊದಲಿಗೆ ಆ ಅರೆಹುಚ್ಚ ಶಶಾಂಕ್ ನಿನ್ನನ್ನು ಸೆಳೆಯಲು "ಚಂದ್ರ ಮಂಚಕೆ ಬಾ ಚಕೋರಿ", "ಸಂಗಾತಿ ನೋಟವೆ ಚಂದ", "ನನ್ನವಳು ನನ್ನೆದೆಯ ಹೊನ್ನಾಡನಾಡುವಳು" ಎಂದೆಲ್ಲಾ ಹಾಡುತ್ತಾ ತಿರುಗುತ್ತಿದ್ದಾನಂತೆ. ಜೊತೆಗೆ ಮಾನಸ ಗಂಗೋತ್ರಿಯಲ್ಲಿ ಕುವೆಂಪು, ಜಿಎಸ್'ಎಸ್, ಕೆ'ಎಸ್'ನರವರ ಪ್ರೇಮಕಾವ್ಯ study ಮಾಡುತ್ತಿದ್ದಾನಂತೆ. ಸಾಲದ್ದಕ್ಕೆ ಅನಂತಸ್ವಾಮಿಯವರ ಸಂಗೀತ ಶಾಲೆಗೂ ಸೇರಿದ್ದಾನಂತೆ. ಹುಷಾರು ಪ್ರಿಯೆ, ಈ ಶಶಾಂಕ್ ಒಬ್ಬ ಹಗಲು ಕುರುಡ ಎಂಬುದು ನಿನಗೇ ಗೊತ್ತಲ್ಲ! ಇನ್ನು ಆ ವರುಣ್ ಕೂಡ ಅದೇ ಹಾದಿ ಹಿಡಿದಿದ್ದಾನಂತೆ? ನಾನು ನಿನಗಾಗಿ ಬಿಡಿಸಿದ್ದ "ಕಾಮನಬಿಲ್ಲು" ಚಿತ್ರಪಟವನ್ನು ಕದ್ದು, ತನ್ನದೇ ಎಂಬಂತೆ ನಿನಗೆ ತೋರಿಸಿದನಂತೆ! ಪ್ರಿಯೆ ಈ ಮೂರ್ಖರ ಗೊಡ್ಡು ವರಸೆಗಳಿಗೆ ನೀನು ಮರುಳಾಗುವುದಿಲ್ಲವೆಂದು ಆಶಿಸುತ್ತೇನೆ. ನನ್ನ ಮುದ್ದು ನಲ್ಲೆಗೆ ನಮ್ಮ ಅಮರ ಪ್ರೇಮ ಇಡೀ ವಿಶ್ವಕ್ಕೆ ಮಾದರಿಯೆಂಬ ಅರಿವಿದೆ ಎನ್ನುವ ದೃಢ ವಿಶ್ವಾಸ ನನ್ನದು.
ಪವನ್ ಹೀಗೆಯೇ ಏನೇನೋ ಹೇಳುತ್ತಿರುತ್ತಾನೆ. ಆ ಅಲೆಮಾರಿ ನನ್ನನ್ನು impress ಮಾಡಲು ಇದೆನ್ನಲ್ಲಾ ಹೇಳಿರುವ ಸಾದ್ಯತೆಗಳಿದ್ದರೂ, ಅವನ ನಿಷ್ಠೆಯನ್ನು ಶಂಕಿಸಲಾರೆ. ಆ ಶಶಾಂಕ್ ಮತ್ತು ವರುಣ್ ರನ್ನು ನಾನು ವಿಚಾರಿಸಿಕೊಳ್ಳುತ್ತೇನೆ. ನೀನು ಮಾತ್ರಾ ನಿಶ್ಚಿಂತಳಾಗಿರು ಪ್ರಿಯೆ .
ಪ್ರಥಮ ಪತ್ರದಲ್ಲೇ ಈ ಕಹಿ ವಿಚಾರ ಪ್ರಸ್ತಾಪಿಸಿರುವುದಕ್ಕೆ ಕ್ಷಮೆ ಇರಲಿ ಪ್ರಿಯೆ. ಹಾಂ! ನನ್ನ ನಿತ್ಯ ಸುಮಂಗಲಿಗೊಂದು ಸಿಹಿ ಸುದ್ದಿಯೂ ಇದೆ. ಅಮೇರಿಕೆಯ ಅಧ್ಯಕ್ಷರಾದ ಒಬಾಮರವರು ತಮ್ಮ ಪ್ರಜೆಗಳಿಗೆ ಸ್ವಾವಲಂಬಿಗಳಾಗಿರಬೇಕೆಂದೂ, ಭರತಖಂಡದ ಮೇಲೆ ಅವಲಂಬಿತರಾಗಬಾರದೆಂದೂ ಕರೆಕೊಟ್ಟಿದ್ದಾರೆ. ಇದನ್ನವರು ಆಚರಣೆಗೆ ತಂದುಬಿಟ್ಟರೆ ನಾನು ಈ ರಾತ್ರಿ ಪಾಳಿಯ ಕೆಲಸವನ್ನು ಕಳೆದುಕೊಳ್ಳುತ್ತೇನೆ. ಕರ್ತವ್ಯ ಭ್ರಷ್ಟನೆಂಬ ಅಪನಿಂದೆಯಿಲ್ಲದಯೆ ಈ ಕಿರಿಕಿರಿಯಿಂದ ಮುಕ್ತನಾಗಲು ಇದೊಂದು ಸುವರ್ಣಾವಕಾಶ. ಆಗ ನಾವಿಬ್ಬರು ಹಾಯಾಗಿ ಯಾವಾಗಲೂ ಒಟ್ಟಿಗೇ ಇರಬಹುದು. ಆ ಶುಭಗಳಿಗೆಯನ್ನು ಬೇಗ ಕರುಣಿಸೆಂದು ಪ್ರಾರ್ಥಿಸೋಣ ಪ್ರಿಯೆ.
ಪ್ರಿಯೆ ಗಣಕ ಭಾಷೆ ಬಳಸಿ ಬರೆದಿರುವ ಈ ಪ್ರಥಮ ಪತ್ರದಲ್ಲಿ ಏನಾದರೂ ತಪ್ಪುಗಳಿದ್ದರೆ ದಯವಿಟ್ಟು ಮನ್ನಿಸು. ಬೆಳಿಗ್ಗೆ ಬೇಗನೆ ನಿನ್ನೆದುರು ಹಾಜರ್! ನನ್ನ ಮುದ್ದು ನಲ್ಲೇ  bye.....
(ಕ್ಷಮೆ ಇರಲಿ, ಇದು ಸೂರ್ಯನ email ನಿಂದ ಕದ್ದ ಪತ್ರ)

4 comments: